ಸುಪರ್ಣಾ ಚಟರ್ಜಿ – ಮಾಜಿ ಪ್ರಾಂಶುಪಾಲರು ಅಂಕುರ್
ನವೆಂಬರ್, 2023
ಅಂಕುರ್ ನಲ್ಲಿ ಒಮ್ಮೆ ಸ್ವಯಂ ಅಧ್ಯಯನ ಕೊಠಡಿಯಾಗಿ ಬಳಸಲಾಗುತ್ತಿದ್ದ ದೊಡ್ಡ ಜಾಗದಲ್ಲಿ 9-12 ನೇ ತರಗತಿಗಳ ಹುಡುಗಿಯರು ಸೇರಿ ಬಂದರು. ಬಹುತೇಕ ಎಲ್ಲರೂ ನನ್ನ ಬಗ್ಗೆ ತಿಳಿದಿದ್ದರು. ಆದ್ದರಿಂದ ನಾವು ಒಬ್ಬರಿಗೊಬ್ಬರ ಪರಿಚಯ ಮಾಡಿಕೊಳ್ಳದೇ ಮಾತನಾಡಲು ಪ್ರಾರಂಭಿಸಿದೆವು. ಆದಾಗ್ಯೂ ನನಗೊಂದು ಉದ್ದೇಶ ಇತ್ತು. ಅಂಕುರ್ ಹಾಗೂ ಶಾಲೆಯಲ್ಲಿ ಅವರು ಹೇಗೆ ಹೊಂದಿಕೊಳ್ಳತ್ತಿದ್ದಾರೆ. ಕಳೆದ ಜನವರಿಯಲ್ಲಿ ಭೇಟಿಯಾದಂದಿನಿಂದ ಇಂದಿನವರೆಗೆ ಅವರ ಶೈಕ್ಷಣಿಕ ಜೀವನ ಮತ್ತು ಅವರ ದಿನನಿತ್ಯದ ಕಾರ್ಯವೈಖರಿ ಹೇಗಿದೆ ಎಂದು ತಿಳಿಯಲು ಬಯಸಿದೆ. ಬಹುತೇಕ ಎಲ್ಲರೂ ಶಾಂತವಾಗಿ ಮತ್ತು ಆತ್ಮವಿಶ್ವಾಸದಿಂದ ಕಾಣುತ್ತಿರುವುದನ್ನು ಗಮನಿಸಿದೆ. ಅವರ ಕಣ್ಣಿನಲ್ಲಿ ಏನೋ ಹೊಸ ಭರವಸೆ, ಆತ್ಮವಿಶ್ವಾಸದ ಉದ್ದೇಶ ಕಾಣುತ್ತಿರುವಂತೆ ಭಾಸವಾಯಿತು.
ನಮ್ಮ ಚರ್ಚೆಯು ಹೊಸ ಶೈಕ್ಷಣಿಕ ಕಟ್ಟಡದಲ್ಲಿ ಹೊಸದಾಗಿ ನೀಡಲಾದ ಸ್ಥಳದಂತಹ ಹಲವಾರು ವಿಷಯಗಳತ್ತ ತಿರುಗಿತು, ಅಲ್ಲಿ ಪ್ರತಿ ತರಗತಿಗೆ ಅಧ್ಯಯನಕ್ಕಾಗಿ ಉತ್ತಮವಾದ ಕೋಣೆಗಳನ್ನು ನೀಡಲಾಗಿರುವುದು, ತರಗತಿಗಳು ನಡೆಯುವ ಸಮಯದಲ್ಲಿ ಒಂದೇ ಕೋಣೆಯಲ್ಲಿ ಬೇರೆ ಬೇರೆ ಕಕ್ಷೆಯ ವಿದ್ಯಾರ್ಥಿಗಳೊಂದಿಗೆ ಒಟ್ಟಿಗೇ ಇರುವ ಒತ್ತಡವು ಸಂಪೂರ್ಣವಾಗಿ ಕಣ್ಮರೆಯಾಗಿರುವ ವಿಷಯ. ಹೀಗೆ ಹಲವು ವಿಷಯಗಳ ಬಗ್ಗೆ ಅವರು ಸಂತೋಷವಾಗಿದ್ದರು. ನಾನು ಮಕ್ಕಳ ಕುಟುಂಬ ಮತ್ತು ಸಂಬಂಧಿಕರ ಕುರಿತು ಕೆಲವು ಪ್ರಶ್ನೆಗಳನ್ನು ಕೇಳಲು ಆರಂಭಿಸಿದೆ.” ನೀವೆಲ್ಲಾ ಕೆಲವು ವರ್ಷಗಳಿಂದ ನಿಮ್ಮಕುಟುಂಬದಿಂದ ದೂರವಾಗಿರುವಿರಿ, ನಿಮ್ಮಲ್ಲಿ ಹಾಗೂ ನಿಮ್ಮ ಆಲೋಚನೆಯ ಪ್ರಕ್ರಿಯೆಯಲ್ಲಿ ಏನಾದರೂ ಬದಲಾವಣೆಗಳು ಆಗಿವೆಯೇ?” ಎಂದು. ತಕ್ಷಣ ಕೆಲವೊಂದು ಕೈಗಳು ನಿಧಾನವಾಗಿ ಮೇಲೆ ಬಂದವು. ನಾನು ಒಂದು ಹುಡುಗಿಯ ಕಡೆಗೆ ಸನ್ನೆ ಮಾಡಿ ಮಾತನಾಡಲು ಹೇಳಿದೆ. ಆ ಹುಡುಗಿ ಹೇಳಿದ ಮಾತು ತುಂಬಾ ಆಶ್ಚರ್ಯವಾಗಿತ್ತು. ತಾನು ರಜೆಯ ಸಂದರ್ಭದಲ್ಲಿ ತನ್ನ ಹಳ್ಳಿಯ ಬಗ್ಗೆ ಗಮನಿಸಿದ ಮತ್ತು ಕೇಳಿದ ವಿಷಯಗಳನ್ನು ತಿಳಿಸಿದಳು. ಹಳ್ಳಿಗರು ಗಂಡು ಮತ್ತು ಹೆಣ್ಣಿನ ಬಗ್ಗೆ ತೋರಿಸುತ್ತಿದ್ದ ತಾರತಮ್ಯದ ಉದಾಹರಣೆಯನ್ನು ಹೇಳಿದಳು. ಈ ವಿಷಯವನ್ನು ತನ್ನ ತಾಯಿ ಮತ್ತು ಚಿಕ್ಕಮ್ಮನ ಮುಂದೆ ಪ್ರಸ್ತಾಪಿಸಿದಾಗ ಅವರು ತನ್ನ ಬಾಯಿ ಮುಚ್ಚಿ ಸುಮ್ಮನಿರುವಂತೆ ಸೂಚಿಸಿದ್ದು, ತನ್ನಂತಹ ಯುವತಿಯರು ಸಮುದಾಯದ ವಿರುದ್ದವಾಗಿ ಮಾತನಾಡುವುದು ಸರಿಯಲ್ಲ ಎಂದು ಸಲಹೆ ನೀಡಿದ್ದರು. ಆದರೆ ಶಾಲೆಯಲ್ಲಿ ಓದಿದ ಈ ಹುಡುಗಿ ಇನ್ನೂ ಮಾತನಾಡದಿರುವುದು ಸರಿಯಲ್ಲ ಎಂದು ಯೋಚಿಸಿ ಈ ವಿಷಯದ ಕುರಿತು ಸಿಡಿದೆದ್ದಳು. ಕೆಲವು ಮನವೊಲಿಕೆ ಮತ್ತು ವಾದಗಳು ಕ್ರಮೇಣ ಆ ಹಳ್ಳಿಯಲ್ಲಿರುವ ಎಲ್ಲಾ ಮಹಿಳೆಯರ ಮನಪರಿವರ್ತನೆಯಾಯಿತು . ಎಲ್ಲಾ ಮಹಿಳೆಯರು ಆ ಹುಡುಗಿಯ ಬೆಂಬಲಕ್ಕೆ ನಿಂತರು, ಅವರ ಸಬಲತೆ ಕುರಿತು ಅರಿತರು. ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಎಂಬ ಬೇಧ-ಭಾವ ವಿಲ್ಲದೇ ಇಬ್ಬರನ್ನೂ ಸಮಾನವಾಗಿ ನೋಡಬೇಕು ಎಂಬುದನ್ನು ತಿಳಿದರು.
ಅದರಂತೆಯೇ, ಇನ್ನೊಬ್ಬ ಹುಡುಗಿ ಸಾಮಾಜಿಕ ಅಧ್ಯಯನ ತರಗತಿಯಲ್ಲಿ ಕಲಿತ ವಿಷಯವೆಂದರೆ ನಮ್ಮ ಪೂರ್ವಜರ ಭೂಮಿಯನ್ನು ವಿಭಜನೆ ಮಾಡಬಾರದು, ಇದರಿಂದ ಕುಟಂಬದ ಉತ್ಪಾದಕತೆಗೆ ದೊಡ್ಡ ಹೊಡೆತ ಬೀಳುತ್ತದೆ ಎಂಬುದು. ವಿಶೇಷವಾಗಿ ಪುರುಷರು ಭೂಮಿಯ ವಿಭಜನೆಯಲ್ಲಿ ಹೆಚ್ಚಿನ ಪಾತ್ರ ವಹಿಸುತ್ತಾರೆ. ಎಲ್ಲರೂ ಒಂದಾಗಿ ವ್ಯವಸಾಯ ಮಾಡುವುದು ಮತ್ತು ಪೂರ್ವಜರ ಭೂಮಿಯನ್ನು ವಿಭಜನೆ ಮಾಡದೇ ಇರುವುದರಿಂದ ಕುಟುಂಬಕ್ಕೆ ಹೆಚ್ಚಿನ ಲಾಭ ದೊರೆಯುತ್ತದೆ ಎಂಬುದಾಗಿ ತಿಳಿಹೇಳಿ ತನ್ನ ಮನೆಯ ಪ್ರಧಾನರಿಗೆ ಮನವೊಲಿಸಿದ್ದಳು
ಇವು ಸಮಾಜದಲ್ಲಿ ಉತ್ತಮ ಬದಲಾವಣೆಯನ್ನು ತರುವಂತಹ ಪ್ರಬಲ ಶಕ್ತಿಗಳು. ಹೀಗೆ ಈ ಹುಡುಗಿಯರು ತಮ್ಮ ಕುಟುಂಬದೊಂದಿಗೆ ಮಾತನಾಡಿದಾಗ ಮತ್ತು ಅವರ ಮನಸ್ಥಿತಿಯಲ್ಲಿ ಬದಲಾವಣೆಗಳನ್ನು ತಂದಾಗ ಮಾತ್ರ ಭಾರತದಲ್ಲಿ ಒಂದು ಸಾಮಾಜಿಕ ಕ್ರಾಂತಿಯನ್ನೇ ನೋಡಬಹುದು. ಆಗಲೇ ಭಾರತೀಯ ಎಂಬ ಹೆಮ್ಮೆ ನಮಗೆ. ಇಂತಹ ಒಂದು ಸುದಿನಕ್ಕಾಗಿ ಕಾಯುತ್ತಿದ್ದೇವೆ.